ಲಿಚಿ ಸಂಸ್ಕರಣೆ ಭರವಸೆಯ ಮೌಲ್ಯವರ್ಧನೆ

ಅಲೆಮಾವತಿ ಪೊಂಗೆನರ್, ಎಸ್.ಕೆ.ಪುರ್ಬೆ, ವಿನೋದ್ ಕುಮಾರ್, ವಿಶಾಲ್ ನಾಥ್, ಎಸ್.ಡಿ.ಪಾಂಡೆ ಮತ್ತು ಅಭಯ್ ಕುಮಾರ್


ಹಣ್ಣಿನ ಸಂಸ್ಕರಣೆಯು ಹೆಚ್ಚಾಗಿ ಹೆಚ್ಚಿನ ಹೂಡಿಕೆಯೊಂದಿಗೆ ಸಂಬಂಧಿಸಿದೆ, ಸಣ್ಣ ರೈತರನ್ನು ಮೌಲ್ಯವರ್ಧನೆ ಮಾಡಲು ತಡೆಯುತ್ತದೆ.ಐಸಿಎಆರ್ ತನ್ನ ಸರಳ ತಂತ್ರಜ್ಞಾನ ಮತ್ತು ಆರಂಭಿಕ ಹ್ಯಾಂಡ್ಹೋಲ್ಡಿಂಗ್ ಬೆಂಬಲದೊಂದಿಗೆ ಬಿಹಾರದ ಲಿಚಿ ರೈತರಿಗೆ ದೊಡ್ಡ ಕನಸುಗಳನ್ನು ಸಾಧಿಸಲು ಸಹಾಯ ಮಾಡಿದೆ.


ಅನೋಜ್ ಕುಮಾರ್ ರೈ ಅವರು ತಮ್ಮ ಲಿಚಿ ಮತ್ತು ಮಾವಿನ ಉತ್ಪನ್ನಗಳೊಂದಿಗೆ ಸಮಸ್ತಿಪುರದ ಪುಸಾದಲ್ಲಿರುವ ತಮ್ಮ ಜಮೀನಿನಲ್ಲಿ

ಯಾವುದೇ ಲಿಚಿ ಮಾರಾಟಗಾರ/ಸಗಟು ವ್ಯಾಪಾರಿಯೊಂದಿಗೆ ಮಾತನಾಡಿ, ಮತ್ತು ಅವರು ಲಿಚಿ ಕೃಷಿಕರಲ್ಲದ ಸಾಧ್ಯತೆಗಳಿವೆ. ಲಿಚಿ ನಾಡು ಎಂದೇ ಕರೆಯಲಾಗುವ ಬಿಹಾರದಲ್ಲಿ ಬೆಳೆ ಕೊಯ್ಲಿಗೆ ಮುನ್ನವೇ ಅದನ್ನು ಗುತ್ತಿಗೆದಾರರಿಗೆ ಮಾರಾಟಮಾಡಲಾಗುತ್ತದೆ. ಅವರು ಬೆಳೆಯನ್ನು ಕೊಯ್ದು ದೇಶದ ಉದ್ದಗಲಕ್ಕೂ ಲಾಭದಾಯಕವಾಗಿ ಮಾರಾಟ ಮಾಡುತ್ತಾರೆ.  ರೈತರು ಮಾರಾಟದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಲಾಗುತ್ತದೆ. ಆದರೆ ಹೀಗೆ ಲಿಚಿ ಬೆಳೆಯುವವರು ಕೊಯ್ಲಿಗೆ ಮುನ್ನವೇ ಮಧ್ಯವರ್ತಿಗಳಿಗೆ ಮಾರಾಟ ಮಾಡುವುದರ ಹಿಂದೆ ಬಲವಾದ ಕಾರಣಗಳಿವೆ.

ಇತರ ಹಣ್ಣುಗಳಿಗಿಂತ ಲಿಚಿ ಕೊಯ್ಲು ಭಿನ್ನವಾಗಿದೆ. ಇಡೀ ತೋಟದ ಕೊಯ್ಲನ್ನು ಒಂದೇ ಬಾರಿ ಮಾಡಬೇಕಾಗುತ್ತದೆ. ಲಿಚಿಯ ಕೊಯ್ಲಿನ ಅವಧಿ ಬಹಳ ಕಡಿಮೆಯಾಗಿದ್ದು ೧೫-೨೦ ದಿನಗಳೊಳಗಾಗಿ ಕೊಯ್ಲು ಮಾಡಿಬಿಡಬೇಕು. ಇಲ್ಲದೆ ಹೋದಲ್ಲಿ ಹಣ್ಣಿನ ಬಣ್ಣವು ಕೆಂಪಿನಿಂದ ಕಂದುಬಣ್ಣಕ್ಕೆ ತ್ವರಿತವಾಗಿ ಬದಲಾಗಿಬಿಡುತ್ತದೆ. ಕೊಯ್ಲು ಮಾಡಿಟ್ಟ ಲಿಚಿ ಹಣ್ಣು ಕೂಡ ೨೪-೪೮ ಗಂಟೆಗಳೊಳಗೆ ಸಾಮಾನ್ಯ ಉಷ್ಣಾಂಶದಲ್ಲಿ ಕಂದು ಬಣ್ಣಕ್ಕೆ ತಿರುಗಿಬಿಡುತ್ತದೆ. ಕಂದು ಬಣ್ಣಕ್ಕೆ ತಿರುಗಿದ ಹಣ್ಣನ್ನು ಗ್ರಾಹಕರು ಕೊಳ್ಳುವುದಿಲ್ಲ. ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣುಗಳು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಮಾರಾಟದಲ್ಲಿ ಕುಸಿತವಾದಾಗ, ದೂರದ ಪ್ರದೇಶಗಳಿಗೆ ಕಳುಹಿಸುವುದು ಕಷ್ಟವಾದಾಗ ಈ ಹಣ್ಣನ್ನು ಸಂರಕ್ಷಿಸುವುದು ಕಷ್ಟ.  ಇದೇ ಕಾರಣಕ್ಕೆ ಕಡಿಮೆ ಆದಾಯ ಸಿಕ್ಕರೂ ಪರವಾಗಿಲ್ಲ ಎಂದು ಬಹುತೇಕ ಲಿಚಿ ಬೆಳೆಗಾರರು ಕೊಯ್ಲಿಗೆ ಮುಂಚಿನ ಮಾರಾಟಕ್ಕೆ ಅಂಟಿಕೊಳ್ಳುತ್ತಾರೆ.

ಸಂಸ್ಕರಣೆಯ ಮೂಲಕ ಮೌಲ್ಯವರ್ಧನೆ – ICAR-NRCL ನಲ್ಲಿ ಮಧ್ಯಸ್ಥಿಕೆ

ಕೊಯ್ಲಿನ ನಂತರದಲ್ಲಿನ ನಷ್ಟ ತಪ್ಪಿಸಲು, ಬೆಳೆಯ ಮೌಲ್ಯವನ್ನು ಹೆಚ್ಚಿಸಲು ಸಂಸ್ಕರಣೆಯು ಒಂದು ವಿಧಾನ. ಸಂಸ್ಕರಿತ ಉತ್ಪನ್ನಗಳು ಪೌಷ್ಟಿಕಾಂಶಭರಿತವಾಗಿರುವುದರ ಜೊತೆಗೆ ಅವುಗಳ ಶೆಲ್ಫ್‌ ಅವಧಿಯು ಹೆಚ್ಚುತ್ತದೆ. ಅವುಗಳನ್ನು ಹೆಚ್ಚುಕಾಲ ಕಾಪಿಟ್ಟು ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅನುಕೂಲವನ್ನು ಕಲ್ಪಿಸುತ್ತದೆ.

ICAR-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಲಿಚಿ (NRCL), ಮುಜಫರ್‌ಪುರ, ಬಿಹಾರವು ಲಿಚಿ ಪಾನೀಯಗಳ ಸಂಸ್ಕರಣೆ ಮತ್ತು ಸಂರಕ್ಷಣೆಗಾಗಿ ತಂತ್ರಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಪ್ರಮಾಣೀಕರಿಸಿದೆ. ಆದಾಗ್ಯೂ, ಬಹು-ರಾಷ್ಟ್ರೀಯ ಕಂಪನಿಗಳು (MNC) ಪ್ರಾಬಲ್ಯ ಹೊಂದಿರುವ ಉದ್ಯಮದಲ್ಲಿ, ಆರಂಭಿಕ ಹೆಚ್ಚಿನ ಹೂಡಿಕೆಯ ಅಗತ್ಯತೆ ಮತ್ತು ಹಣಕಾಸು ಮತ್ತು ನೀತಿ ಬೆಂಬಲದ ಕೊರತೆ, ಮಧ್ಯಸ್ಥಗಾರರಲ್ಲಿ ತಂತ್ರಜ್ಞಾನದ ಅಳವಡಿಕೆಯು ಬಹಳ ಕಡಿಮೆಯಿದೆ.

2014 ಮತ್ತು 2017 ರ ನಡುವೆ, ತರಬೇತಿ ಕಾರ್ಯಕ್ರಮಗಳು, ಕಿಸಾನ್ ಮೇಳಗಳು, ಮತ್ತಿತರ ಕಾರ್ಯಕ್ರಮಗಳ ಸಮಯದಲ್ಲಿ NRCL ತಂತ್ರಜ್ಞಾನದ ಧನಾತ್ಮಕ ಅಂಶಗಳನ್ನು ಹಂತಹಂತವಾಗಿ ಪರಿಚಯಿಸಿತು. ಕೇಂದ್ರವು ಪ್ರಾಯೋಗಿಕವಾಗಿ ತಂತ್ರಜ್ಞಾನದ ಸಾಧ್ಯತೆಗಳನ್ನು ಪರೀಕ್ಷಿಸುವ ಸಲುವಾಗಿ ಪಾನೀಯಗಳನ್ನು ತಯಾರಿಸಿ ಮಾರಾಟದ ಸಾಧ್ಯತೆಗಳನ್ನು ಕಂಡುಕೊಳ್ಳಲು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬೆಳೆಗಾರರ ಆಸಕ್ತಿಯನ್ನು ಗಮನಿಸಿ ಕೇಂದ್ರವು ಲಿಚಿ ಪಾನೀಯಗಳ ಸೂಕ್ಷ್ಮ ಸಂಸ್ಕರಣೆಗೆ ಸಂಬಂಧಿಸಿದಂತೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು (EDP) ಪ್ರಾರಂಭಿಸಿತು. ಅದರಲ್ಲಿ ಭಾಗವಹಿಸಿದವರಿಗೆ ಪಾನೀಯ ಸಂರಕ್ಷಣೆ, ಆಹಾರ ಸುರಕ್ಷತೆ ನಿಯಂತ್ರಣ, ಪರವಾನಿಗೆ ಪಡೆಯುವ ವಿಧಾನ, ಶೇಖರಣೆ ಮತ್ತು ಮಾರುಕಟ್ಟೆಯ ಹಿಂದಿನ ವಿಜ್ಞಾನದ ಕುರಿತು ಅರಿವು ಮೂಡಿಸಲಾಯಿತು. ಕನಿಷ್ಠ ಹೂಡಿಕೆಯೊಂದಿಗೆ ತಮ್ಮ ಅಡುಗೆಮನೆಯ ಸೀಮಿತ ಸೌಕರ್ಯಗಳನ್ನೇ ಬಳಸಿ ಪಾನೀಯಗಳನ್ನು ತಯಾರಿಸಬಹುದು ಎಂದು ತರಬೇತಿ ಪಡೆದವರು ಅರಿತ ನಂತರ 2018ರ ವೇಳೆಗೆ ಮಾರುಕಟ್ಟೆಯಲ್ಲಾಗುತ್ತಿದ್ದ ಏರಿಳಿತಗಳ ಪರಿಸ್ಥಿತಿಯು ಬದಲಾಗಲು ಆರಂಭಿಸಿತು.

ದೀವಟಿಗೆ ಹೊತ್ತು ಮುನ್ನಡೆದವರು

ಮುಜಾಫರ್‌ಪುರದ ಕುರ್ಹಾನಿ ಬ್ಲಾಕ್‌ನ 55 ವರ್ಷದ ರೈತ ರಾಮ ಸರೋವರ್‌ಗೆ ತನ್ನ 10 ಮಾವಿನ ಗಿಡಗಳಿಂದ ಕುಟುಂಬದ ಖರ್ಚುಗಳನ್ನು ಪೂರೈಸಲು ಸಾಕಾಗುವಷ್ಟು ಆದಾಯವನ್ನು ಗಳಿಸಲು ಸಾಧ್ಯವಾಗಲಿಲ್ಲ. ಹಣ್ಣಿನ ಸಂಸ್ಕರಣೆಯನ್ನು ಕಲಿತರೆ ತನ್ನ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ಮನವರಿಕೆಯಾಗಿ ಅವರು NRCLನಿಂದ ಸಂಸ್ಕರಣೆಯ ತಂತ್ರಗಳನ್ನು ಕಲಿತರು. ಆರಂಭದಲ್ಲಿ ಅವರು ಮಾವಿನ ಸ್ಕ್ವ್ಯಾಷ್ ಮತ್ತು RTS (ರೆಡಿ ಟು ಸರ್ವ್) ಉತ್ಪನ್ನಗಳನ್ನು ಉತ್ಪಾದಿಸಲು ಪ್ರಾರಂಭಿಸಿದರು. ನಂತರ, ಅವರು ನೆರೆಯ ರೈತರಿಂದ ಲಿಚಿ ಹಣ್ಣನ್ನು ಸಂಗ್ರಹಿಸುವ ಮೂಲಕ ಲಿಚಿ ತಿರುಳನ್ನು ಸಂಸ್ಕರಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ದೇಶದ ಉಳಿದ ಭಾಗಗಳಲ್ಲಿನ ಯುವಕರಂತೆ ಹೊಲದಲ್ಲಿ ದುಡಿಯುವುದು ಉದ್ಯೋಗವಲ್ಲ ಎಂದು ಸರೋವರ ಅವರ ಮಗ ಕೂಡ ತಿಳಿದಿದ್ದ. “ನನ್ನ ವಿದ್ಯಾವಂತ-ನಿರುದ್ಯೋಗಿ ಮಗನ ಬಗ್ಗೆ ನಾನು ಚಿಂತಿತನಾಗಿದ್ದೆ. ಅವನಿಗೆ ಕೃಷಿಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ ನಮ್ಮ ಲಿಚಿ ಸಂಸ್ಕರಣಾ ವ್ಯವಹಾರವು ಪ್ರಾರಂಭವಾಗಿ ಲಾಭ ಬರಲು ಪ್ರಾರಂಭಿಸಿದಾಗ, ಅವನು ನನ್ನೊಂದಿಗೆ ಪೂರ್ಣಾವಧಿ ಕೆಲಸದಲ್ಲಿ ತೊಡಗಿಸಿಕೊಂಡನು” ಎಂದು ಶ್ರೀ ಸರೋವರ್ ನಸುನಕ್ಕರು. ಅವರ 24 ವರ್ಷದ ಮಗ ಭರತ್ ಭೂಷಣ್, ಅಂದಿನಿಂದ ಲಿಚಿ ಪ್ರೊಸೆಸರ್ ಮತ್ತು ಮಾರಾಟಗಾರ ಎಂದು ಹೆಮ್ಮೆಯಿಂದ ಗುರುತಿಸಿಕೊಂಡಿದ್ದಾನೆ. 2018 ರಲ್ಲಿ, ಅವರು ದೊಡ್ಡ ಸಾಮರ್ಥ್ಯದ ಪಲ್ಪರ್ ಖರೀದಿಸಲು ತಮಗೆ ಬಂದಿದ್ದ ಲಾಭವನ್ನು ಮರು-ಹೂಡಿಕೆ ಮಾಡಿದರು. ಇಂದು, ಅವರ ಕಂಪನಿ, ರಾಮ್ ಸರೋವರ್ ಆಗ್ರೋ ಫುಡ್ಸ್, ದೇಶಾದ್ಯಂತ ಖರೀದಿದಾರರಿಗೆ ಲಿಚಿ ಪಲ್ಪ್ ಅನ್ನು ಮಾರಾಟ ಮಾಡುತ್ತದೆ. ಸರೋವರ್‌ ಕಂಪನಿಯು ಲಿಚಿ ಸ್ಕ್ವ್ಯಾಷ್‌ ಮತ್ತು ರೆಡಿ ಟು ಸರ್ವ್‌ ಉತ್ಪನ್ನಗಳನ್ನು ತಯಾರಿಸಿ ಚಿಲ್ಲರೆ ಮಾರಾಟಗಾರರು, ರೆಸ್ಟೊರೆಂಟುಗಳು ಮತ್ತು ಡಾಭಾಗಳಿಗೆ ಪೂರೈಸುತ್ತಾರೆ. ಅವರ ಸುವಾಸಿತ ಪಾನೀಯಗಳನ್ನು ಮುಜಾಫರ್‌ ಇಂದ ಪಟ್ನಾ ಹೆದ್ದಾರಿಯ ಉದ್ದಕ್ಕೂ ಇರುವ ಅಂಗಡಿಗಳಲ್ಲಿ ಕಾಣಬಹುದು. ಮೂರೇ ವರ್ಷಗಳಲ್ಲಿ ಇವರ ಘಟಕವು ಹತ್ತಿರದ ಬೆಳೆಗಾರರ ನಿರೀಕ್ಷೆಗಳನ್ನು ಪೂರೈಸುವ ಗುಣಮಟ್ಟದ ಸಂಸ್ಕರಣಾ ಘಟಕವಾಗಿ ಹೊರಹೊಮ್ಮಿದೆ.

ಹಣ್ಣುಗಳ ನಡುವೆ ಲಿಚಿಯನ್ನು ಎದ್ದು ಕಾಣುವಂತೆ ಮಾಡುವುದು ಅದರ ಆಕರ್ಷಕ ಸುವಾಸನೆ. ಪಾನೀಯಗಳು, ಐಸ್‌ಕ್ರೀಮ್‌ಗಳು ಮತ್ತು ಸಿಹಿತಿಂಡಿಗಳಿಂದ ಹಿಡಿದು, ಅಗರಬತ್ತಿಯಂತಹ ಗೃಹ ಉತ್ಪನ್ನಗಳು, ಲಿಪ್‌ಸ್ಟಿಕ್‌ಗಳಂತಹ ಸೌಂದರ್ಯವರ್ಧಕಗಳಲ್ಲಿ ಇದು ಬಳಕೆಯಾಗುತ್ತದೆ. ಇದರಿಂದಲೇ ಗ್ರಾಹಕರ ನಡುವೆ ಇದೆಷ್ಟು ಜನಪ್ರಿಯವಾಗಿದೆ ಎನ್ನುವುದನ್ನು ತಿಳಿಯಬಹುದು. ಸಮಸ್ತಿಪುರದ ಮತ್ತೊಬ್ಬ ರೈತ ೫೦ ವರ್ಷದ ಶ್ರೀ ಅನೋಜ್‌ ಕುಮಾರ್‌ ರೈ ಅವರು ಲಿಚಿ ಸಂಸ್ಕರಣ ವಿಧಾನಗಳನ್ನು ಕಂಡುಹಿಡಿದು, ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಲಾಭಗಳಿಸುವುದು ತಮ್ಮ ಬಾಲ್ಯದ ಕನಸು ಎಂದು ಹೇಳುತ್ತಾರೆ. “ಲಿಚಿ ಕೇವಲ ಒಂದು ತಿಂಗಳು ಮಾತ್ರ ಸಿಗುತ್ತದೆ. ಅದನ್ನು ಸಂಸ್ಕರಿಸಿ ವರ್ಷವಿಡೀ ಗ್ರಾಹಕರಿಗೆ ಒದಗಿಸಲು ಬಯಸುತ್ತೇನೆ “ಎಂದು ಅನೋಜ್‌ ಹೇಳುತ್ತಾರೆ. ಅವರ ಕುಟುಂಬವು ಸಮಸ್ತಿಪುರದ ಕುಗ್ರಾಮವಾದ ಮಲಿಕೋರ್‌ನಲ್ಲಿ 5 ಎಕರೆ ಭೂಮಿಯನ್ನು ಹೊಂದಿದೆ. ಅಂದಮಾತ್ರಕ್ಕೆ ಅವರು ತಮ್ಮ ಆಶಾವಾದವನ್ನು ಬಿಟ್ಟುಕೊಟ್ಟಿಲ್ಲ. ಮೇ 2020ರಲ್ಲಿ ಕೋವಿಡ್‌-19 ತೀವ್ರವಾಗಿದ್ದಾಗ ಲಿಚಿಯ ಮಾರಾಟ ಕಷ್ಟವಾಯಿತು. ಅವರು ಈ ಕಷ್ಟವನ್ನೇ ಅವಕಾಶವಾಗಿ ಬದಲಾಯಿಸಿಕೊಳ್ಳುವ ಮನಸ್ಸು ಮಾಡಿದರು.

ಲಿಚಿ ಬಹುಬೇಗ ಹಾಳಾಗುವ ಹಣ್ಣು. ದೇಶವ್ಯಾಪಿ ಲಾಕ್‌ಡೌನ್‌ ನಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿತು. ನನ್ನ ನಷ್ಟದ ಬಗ್ಗೆಯೇ ಚಿಂತಿಸುತ್ತಾ ಕೂರುವ ಬದಲು ಹಣ್ಣನ್ನು ಸಂಸ್ಕರಿಸಿ ಪಲ್ಪ್‌ ಸಂರಕ್ಷಿಸುವ ನಿರ್ಧಾರ ಮಾಡಿದೆ,” ಎಂದು ಹೇಳುತ್ತಾರೆ. NRCLನವರ ತಾಂತ್ರಿಕ ಮೇಲ್ವಿಚಾರಣೆಯೊಂದಿಗೆ ಅನೋಜ್‌ ಅವರು ತಮ್ಮ ಬೆಳೆಯನ್ನು ರಕ್ಷಿಸಿಕೊಂಡಿದ್ದಲ್ಲದೆ ಹಣ್ಣುಸಂಸ್ಕರಣೆಯನ್ನು ಆರಂಭಿಸಿದರು.  ಅವರ 60 ಚಿಲ್ಲರೆ ಲಿಚಿ ಮರಗಳಿಂದ ದಲ್ಲಾಳಿಗಳ ಮೂಲಕ ಹೆಚ್ಚೆಂದರೆ ರೂ. 40,000 ಗಳಿಸುತ್ತಿದ್ದರು. 2020ರ ಬೇಸಿಗೆಯಲ್ಲಿ ಹತ್ತು ಮರಗಳಿಂದ ಕೊಯ್ಲು ಮಾಡಿದ 500 ಕೆಜಿ ಹಣ್ಣನ್ನು ಸಂಸ್ಕರಿಸಿ RTS ಉತ್ಪನ್ನ ತಯಾರಿಸುವ ಮೂಲಕ ರೂ. 79,200ರಷ್ಟು ಆದಾಯ ಗಳಿಸಿದರು.  ಲಿಚಿ ಸಂಸ್ಕರಣೆಯ ಯಶಸ್ಸಿನಿಂದ ಪ್ರೇರಿತರಾಗಿ ಅದೇ ವಿಧಾನವನ್ನು “ಮಲ್ಲಿಕ” ಮಾವಿಗೂ ಅನ್ವಯಿಸಿದರು. ಇಂದು ಅವರ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿವೆ. ಶ್ರೀ ಸರೋವರ್‌ ಅವರಂತೆಯೇ ಇವರು ಕೂಡ ರೆಸ್ಟೋರೆಂಟುಗಳು, ಸಣ್ಣ ಅಂಗಡಿಗಳು ಮತ್ತು ಕೆಟರಿಂಗ್‌ ಮಾಡುವವರನ್ನು ತಮ್ಮ ಗ್ರಾಹಕರಾಗಿ ಗುರುತಿಸಿದ್ದಾರೆ. ಶ್ರೀ ಅನೋಜ್‌ ಅವರ ಕೃಷಿಯಲ್ಲಿನ ನಾವಿನ್ಯತೆಯ ಕುರಿತಾದ ಆಸಕ್ತಿಯು ಪ್ರಶಂಸಾರ್ಹವಾಗಿದೆ. ಪ್ರಯತ್ನ ಪಟ್ಟಲ್ಲಿ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. ಅವರ 5 ಎಕರೆ ಪ್ರದೇಶದಲ್ಲಿ ವಿವಿಧ ಹಣ್ಣಿನ ಗಿಡಗಳಿವೆ – ಲಿಚಿ, ಮಾವು, ಸೇಬು, ಪೀಚ್, ಪ್ಲಮ್, ಕಿನ್ನೌ, ಮ್ಯಾಂಡರಿನ್, ಸುಣ್ಣ, ದ್ರಾಕ್ಷಿ, ಜಾಮೂನ್, ಅಯೋನ್ಲಾ ಮೊದಲಾದವು ಇವೆ. ಇವುಗಳನ್ನು ಅವರು ದೇಶಾದ್ಯಂತ ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿದಾಗ ಸಂಗ್ರಹಿಸಿದ್ದಾರೆ. ಶ್ರೀ ಅನೋಜ್‌ ಅವರು ತಮ್ಮ ಉತ್ಪನ್ನಗಳಲ್ಲಿ ವೈವಿಧ್ಯತೆಯ ಬಹುಪಾಲನ್ನು ಸಂಸ್ಕರಣೆಯಿಂದ ಪಡೆದಿದ್ದಾರೆ. ಅವರ ಯಶಸ್ಸನ್ನು ನೋಡಿದ ನೆರೆಯ ರೈತರು ಅವರೊಡನೆ ಕೈಜೋಡಿಸಿ ಪೂಸಾ ಫಾರ್ಮರ್ಸ್‌ ಪ್ರೊಡ್ಯೂಸರ್‌ ಕಂಪನಿಯನ್ನು ಸ್ಥಾಪಿಸಿದರು.

ಕೋಷ್ಟಕ : ಶ್ರೀ ಅನೋಜ್‌ ಕುಮಾರ್‌ ರೈ ಅವರು ಲಿಚಿ ಸಂಸ್ಕರಣೆಯಿಂದ ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಿಕೊಂಡರು

ಮಾರಾಟ ವಿಧಾನ ತಾಜಾ ಹಣ್ಣಿನ ಮಾರಾಟ ಸಂಸ್ಕರಣೆ ಒಟ್ಟು ಆದಾಯ
ಎಲ್ಲಾ ಇಳುವರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುವುದು (ಸಾಂಪ್ರದಾಯಿಕ) 3000 ಕೆಜಿ  ಇಲ್ಲ ₹ 40,000/-
ಇಳುವರಿಯ ಸ್ವಲ್ಪ ಭಾಗವನ್ನು ಸಂಸ್ಕರಿಸುವುದು (2020ರ ಅನುಭವ) 2500 ಕೆಜಿ 500 ಕೆಜಿ ₹ 1,12,500/-
ಪೂರ್ತಿ ಇಳುವರಿಯ ಸಂಸ್ಕರಣೆ ಇಲ್ಲ 3000 ಕೆಜಿ ₹ 4,75,000/-

ಸಮರ್ಪಣ್ ಜೀವಿಕಾ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (SJMKPCL), ಜಪಾಹಾ, ಮುಜಾಫರ್‌ಪುರ (ಬಿಹಾರ) ನಲ್ಲಿರುವ ಒಂದು ಗುಂಪು ತಾಂತ್ರಿಕ ಮತ್ತು ಮಾರುಕಟ್ಟೆ ಮಧ್ಯಸ್ಥಿಕೆಗಳ ಮೂಲಕ ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯೊಂದಿಗೆ ಮಹಿಳಾ ರೈತರೊಂದಿಗೆ ಕೆಲಸ ಮಾಡುತ್ತದೆ. ಹಣ್ಣು ಮತ್ತು ತರಕಾರಿ ಸಂಸ್ಕರಣೆಯು ಆದಾಯವನ್ನು ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿದೆ. ಮಾರ್ಚ್ 2020 ರ ಆರಂಭದಲ್ಲಿ ICAR-NRCL ನಲ್ಲಿ EDP ಗೆ ಹಾಜರಾಗಲು ಕಂಪನಿಯು ತಾನಾಗಿ ಮುಂದೆ ಬಂದಿತು. ಮೇ-ಜೂನ್‌ನಲ್ಲಿ ನಂತರದ ಲಿಚಿ ಋತುವಿನಲ್ಲಿ ಸುಮಾರು 20 ಟನ್ಗಳಷ್ಟು ಲಿಚಿ ತಿರುಳನ್ನು ಸಂಸ್ಕರಿಸಲಾಯಿತು. EDP ​​ಇಂದ ಪಡೆದ ಜ್ಞಾನದೊಂದಿಗೆ, ಕಂಪನಿಯು ಕ್ರಮೇಣ ಲಿಚಿ ಸ್ಕ್ವ್ಯಾಷ್ ಮತ್ತು RTS ಉತ್ಪಾದನೆಯನ್ನು ಪ್ರಾರಂಭಿಸಿತು. ವೈವಿಧ್ಯಮಯ ಉತ್ಪನ್ನ ಶ್ರೇಣಿ ತಯಾರಿಸಲು ಮತ್ತು ಲಿಚಿ ಮೌಲ್ಯ ಸರಪಳಿಯನ್ನು ಹತೋಟಿಗೆ ತರಲು ಹಾಗೂ ಆ ಮೂಲಕ ರೈತರ ಜೀವನೋಪಾಯವನ್ನು ಸುಧಾರಿಸಲು ಮುಂಬರುವ ಋತುಗಳಲ್ಲಿ ಸಂಸ್ಕರಣೆಯ ಪ್ರಮಾಣವನ್ನು ಹೆಚ್ಚಿಸಲು ಗುಂಪು ಮತ್ತಷ್ಟು ಯೋಜನೆಗಳನ್ನು ಯೋಜಿಸಿದೆ.

ಈ ರೀತಿಯ ಯಶಸ್ಸಿನ ಕತೆಗಳನ್ನು ಮೊದಲ ಹೆಜ್ಜೆಗಳು ಇಲ್ಲವೇ ಆಹಾರ ಸಂಸ್ಕರಣಾ ಉದ್ಯಮದ ಅತ್ಯುತ್ತಮ ಭಾಗವಾಗಿ ಪರಿಗಣಿಸಬಹುದು. ಈ ಬದಲಾವಣೆಯ ಗಾಳಿ ನಿಜಕ್ಕೂ ಉತ್ತೇಜನಕಾರಿಯಾಗಿದೆ. ಹಣ್ಣಿನ ಸಂಸ್ಕರಣೆ ಕುರಿತು ಸಣ್ಣ ಹಾಗೂ ಅತಿಸಣ್ಣ ರೈತರಲ್ಲಿ ಆಸಕ್ತಿ ಹಾಗೂ ಆಶಾವಾದ ಮೂಡಿದೆ.  ಬಿಹಾರದ ಶಾಹಿ ಲಿಚಿಯನ್ನು GI (ಜಿಯಾಗ್ರಾಫಿಕಲ್‌ ಇಂಡಿಕೇಶನ್) ಎಂದು ನೋಂದಾಯಿಸಲಾಗಿದೆ. ಇದು ಬಿಹಾರದಲ್ಲಿ ಅದರ ಉತ್ಪಾದನೆಯ ಪ್ರದೇಶಕ್ಕೆ ಕಾರಣವಾದ ಗುಣಮಟ್ಟ ಮತ್ತು ವಿಶಿಷ್ಟತೆಯನ್ನು ಎತ್ತಿತೋರುತ್ತದೆ. ಇದರೊಂದಿಗೆ  MOFPI ಯ PMFME ಯೋಜನೆಯಡಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಕಾರ್ಯಕ್ರಮದಲ್ಲಿ ಬಿಹಾರದ ಮೂರು ಜಿಲ್ಲೆಗಳಾದ ಮುಜಫರ್‌ಪುರ್, ಪೂರ್ವ ಚಂಪಾರಣ್ ಮತ್ತು ಸೀತಾಮರ್ಹಿಗಳಿಗೆ ಲಿಚಿಯನ್ನು ಆಯ್ಕೆ ಮಾಡುವ ಮಾಡಲಾಗಿದೆ. ಇದು ಲಿಚಿಯ ಸಂಸ್ಕರಣಾ ಮಾರ್ಗಗಳನ್ನು ಹೆಚ್ಚಿಸುವ ಅಗತ್ಯವನ್ನು ತೋರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಭಾವ ಬೀರುವ ಅಂಶಗಳು

ರಾಮ್ ಸರೋವರ ಮತ್ತು ಅನೋಜ್ ರೈ ಅವರಂತಹವರು ಯಶಸ್ವಿಯಾಗಲು ಪ್ರಮುಖವಾದ ಕೆಲವು ಕಾರಣಗಳು ಹೀಗಿವೆ.

ತಮ್ಮದೇ ಅಡುಗೆ ಮನೆಯಲ್ಲಿ ಸಂಸ್ಕರಣ

ಸಂಸ್ಕರಣಕ್ಕೆ ಬೇಕಾದ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಹೂಡಿಕೆ ಅಗತ್ಯ ಎನ್ನುವ ತಪ್ಪು ಅಭಿಪ್ರಾಯವಿದೆ. ರೈತರು ಜಮೀನಿನಲ್ಲಿ ಸಂಸ್ಕರಣೆ ಮಾಡುವುದನ್ನು ತಡೆಯುವ ಏಕೈಕ ಕಾರಣ ಇದು. ಸಣ್ಣ ಮತ್ತು ಅತಿಸಣ್ಣ ರೈತರು ಕೂಡ ತಮ್ಮ ಮನೆಯಲ್ಲೇ ಸಂಸ್ಕರಣ ಮಾಡಬಹುದು ಎನ್ನುವುದನ್ನು ಇದು ತೋರಿಸುತ್ತದೆ. ಇದನ್ನು ಸಾಧಿಸಲು, ಮೈಕ್ರೋ-ಲೆವೆಲ್ ಪ್ರೊಸೆಸಿಂಗ್ ತಂತ್ರಗಳ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣವು ಮುಖ್ಯವಾಗುತ್ತದೆ. ಅಂದರೆ, ಕಲಿಯುವವರು ತಮ್ಮ ಮನೆಗಳಲ್ಲಿಯೇ ಪುನರಾವರ್ತಿಸಬಹುದಾದ ಆಹಾರ ಸಂಸ್ಕರಣೆಯ ಮೇಲೆ ವೈಜ್ಞಾನಿಕವಾಗಿ ಉತ್ತಮ ಅನುಭವ/ತರಬೇತಿಯನ್ನು ಒದಗಿಸುವುದು. ಮುಜಾಫರ್‌ಪುರದ ಮತ್ತೊಬ್ಬ ಉದಯೋನ್ಮುಖ ಸಂಸ್ಕಾರಕ ಅಖಿಲೇಶ್ ಹೇಳುವಂತೆ, “ನನಗೆ ವಿವಿಧ ಹಣ್ಣುಗಳ ತೋಟವಿದೆ. ದೊಡ್ಡ ಕನಸುಗಳೂ ಇವೆ. ಆದರೆ ನಾನು ಏನಾದರೂ ದೊಡ್ಡದನ್ನು ಮಾಡಲು ಆತುರಪಡುವ ಮೊದಲು, ಹಣ್ಣಿನ ಸಂರಕ್ಷಣೆಯ ಮೂಲ ತತ್ವಗಳನ್ನು ತಿಳಿದುಕೊಳ್ಳಬೇಕು. ಆಗ ಮಾರಾಟಕ್ಕೆ ತಕ್ಕುದಾದ ಉತ್ಪನ್ನವನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.”

ಸಾಂಸ್ಥಿಕ ಸಹಾಯ

ಪ್ಯಾಕೇಜಿಂಗ್‌ಗಾಗಿ ಗೊಂಚಲು ಹಣ್ಣುಗಳನ್ನು ಸಂಗ್ರಹಿಸುವ ಕೆಲಸಗಾರರು

ತಾಂತ್ರಿಕ ಕೌಶಲ್ಯಗಳು ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವುದರಿಂದ ಹಿಡಿದು ಪ್ರತಿ ಹಂತದಲ್ಲೂ ಸಣ್ಣ ವ್ಯವಹಾರಗಳಿಗೆ ಮಾರ್ಗದರ್ಶನ ನೀಡುವವರೆಗೆ ಸಾಂಸ್ಥಿಕ ಬೆಂಬಲವನ್ನು ನೀಡುವುದರಿಂದ ಸಂಸ್ಕರಣಕಾರರನ್ನು ಮುಂದಕ್ಕೆ ಕೊಂಡೊಯ್ಯಬಹುದು. ಅಗ್ರಿ-ಬಿಜಿನೆಸ್‌ ಇನ್ಕ್ಯೂಬೇಶನ್‌ ಯೂನಿಟ್‌ಗಳು (ABI) ಮತ್ತು ICAR, KVKಗಳು, ಕೃಷಿ ವಿಶ್ವವಿದ್ಯಾಲಯಗಳಂತಹ ಸಾರ್ವಜನಿಕ ಸಂಸ್ಥೆಗಳಲ್ಲಿನ ಟ್ರಾನ್ಸಫರ್‌ ಆಫ್‌ ಟೆಕ್ನಾಲಜಿ (ToT) ವಿಭಾಗಗಳು ಆಹಾರ ಸಂಸ್ಕರಣೆ ಸೇರಿದಂತೆ ಕೃಷಿಯ ಸಣ್ಣಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುತ್ತವೆ. ICAR-NRCL ನಲ್ಲಿ, EDP ಅಡಿಯಲ್ಲಿ, ತರಬೇತಿಯ ನಂತರ ಭಾಗವಹಿಸುವವರಿಗೆ ಎಲ್ಲಾ ಸಂಭಾವ್ಯ ತಾಂತ್ರಿಕ ಮಾರ್ಗದರ್ಶನಗಳೊಂದಿಗೆ ಉತ್ಪನ್ನ ಅಭಿವೃದ್ಧಿಗಾಗಿ ಪ್ರಯೋಗಾಲಯದ ಉಪಕರಣಗಳ ಬಳಕೆಗೆ ಅವಕಾಶ ನೀಡಲಾಗುತ್ತದೆ. ಕೊಯ್ಲೋತ್ತರ ಕಾರ್ಯಾಗಾರ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಬೆಳೆಗಾರರಿಗೆ ಕಸ್ಟಂ ಹೈರಿಂಗ್‌ ಆಧಾರದ ಮೇಲೆ ಒದಗಿಸಲಾಗುತ್ತದೆ. ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಎಫ್‌ಎಸ್‌ಎಸ್‌ಎಐ ಪರವಾನಗಿ ಸೇರಿದಂತೆ ಇತರ ಕಡ್ಡಾಯ ಪ್ರಮಾಣೀಕರಣಗಳನ್ನು ಪಡೆಯುವ ಕುರಿತು ಮಾರ್ಗದರ್ಶನ ನೀಡುತ್ತವೆ. ಇವೆಲ್ಲವೂ ಸಂಸ್ಕರಣೆಯಲ್ಲಿನ ವೈಫಲ್ಯದ ಅಪಾಯ ತಗ್ಗಿಸಲು ರೈತರಿಗೆ ಸಹಾಯ ಮಾಡುತ್ತದೆ.

 

ಕನಸು ಕಾಣುವುದು ಬೇರೆ, ಅದನ್ನು ನನಸಾಗಿಸುವುದು ಬೇರೆ. ಆಹಾರೋದ್ಯಮದಲ್ಲಿ ಹಲವಾರು ದೊಡ್ಡ MNCಗಳ ಪ್ರಾಬಲ್ಯವಿದೆ. ಇವರ ನಡುವೆ ಸ್ಪರ್ಧಿಸಿ ಯಶಸ್ವಿಯಾಗುವುದು ಅಷ್ಟು ಸುಲಭವಲ್ಲ. ದೊಡ್ಡದಾಗಿ ಬಂಡವಾಳ ಹೂಡುವ ಮೊದಲು ಸಣ್ಣ ಸಂಸ್ಕರಣದಾರ ಮೊದಲು ಉತ್ಪನ್ನವನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆ ಹಾಗೂ ಗ್ರಾಹಕರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಪರೀಕ್ಷಿಸಬೇಕು. ಉತ್ಪನ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಮಾತ್ರ ಬಂಡವಾಳ ಹೂಡಿಕೆಯ ಕುರಿತು ನಿರ್ಧಾರ ಕೈಗೊಳ್ಳಬೇಕು. ಉತ್ಪನ್ನ ಮಾರಾಟವಾಗದೆ ಹೋದರೆ ವ್ಯಾಪಾರವನ್ನು ನಷ್ಟದತ್ತ ತಳ್ಳುವ ಅಪಾಯವಿರುತ್ತದೆ. ಅನೋಜ್‌ ಹೇಳುವಂತೆ, “ಚಿಕ್ಕದಾಗಿ ಆರಂಭಿಸಿ ಸ್ಥಳೀಯ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಸಂಸ್ಕರಣ ಮಾಡುವುದು ನನ್ನ ಯೋಜನೆ. ನನ್ನ ಉತ್ಪನ್ನಗಳು ಜನಪ್ರಿಯಗೊಳಿಸಲು ಹಾಗೂ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ವ್ಯಾಪಾರ ಬೆಳೆಯುವುದನ್ನು ನೋಡಿಕೊಂಡು ಅದರ ವಿಸ್ತರಣೆ ಹಾಗೂ ಹೆಚ್ಚಿನ ಹೂಡಿಕೆಯ ಕುರಿತು ಯೋಚಿಸುತ್ತೇನೆ.”

ಉಪಸಂಹಾರ

ಲಿಚಿ ಸಂಸ್ಕರಣೆಯಲ್ಲಿ ಮಾರಾಟದ ಹಾಗೂ ಭರವಸೆ ನೀಡಬಲ್ಲಂತಹ ಅವಕಾಶಗಳಿವೆ. ಲಿಚಿಯ ತಾಜಾತನಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಸಂಸ್ಕರಣೆ ಮುಖ್ಯ ಸಲಕರಣೆಯಾಗಿದೆ. ಹಣ್ಣಿನ ಸಂಸ್ಕರಣೆಯ ಮೂಲಕ ಬೆಳೆಯುವ ಉದ್ಯಮ ಹಾಗೂ ವಹಿವಾಟು ಅದಕ್ಕೆ ಸಂಬಂಧಿಸಿದ ಇತರ ಉದ್ಯಮಗಳಾದ ಪ್ಯಾಕೇಜಿಂಗ್‌, ಆಹಾರ ಪದಾರ್ಥಗಳು, ನೀರಿನ ಶುದ್ಧಿಕರಣ, ಲಾಗಿಸ್ಟಿಕ್ಸ್‌, ವೇರ್‌ ಹೌಸಿಂಗ್‌, ಇ-ಕಾಮರ್ಸ್‌ ಇತ್ಯಾದಿಗಳನ್ನು ಬೆಳೆಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮುಜಾಫರ್‌ನಲ್ಲಿ ಹಾಗೂ ಅದರ ಸುತ್ತಮುತ್ತ ಲಿಚಿಯ ಕೆಲವು ಸಣ್ಣ ಸಂಸ್ಕರಣ ಘಟಕಗಳು ತಲೆಯೆತ್ತಿವೆ. ಶಾಹಿ ಲಿಚಿ ಈಗಾಗಲೇ GI ಯೊಂದಿಗೆ ನೋಂದಾವಣೆಗೊಂಡಿದೆ. PMFME ಯೋಜನೆಯ ರೂಪದಲ್ಲಿ ಪ್ರಸ್ತುತ ಸಾಂಸ್ಥಿಕ ಬೆಂಬಲದೊಂದಿಗೆ, ಇದರ ಭವಿಷ್ಯವು ಉಜ್ವಲವಾಗಿ ಕಾಣುತ್ತಿದೆ. ಜೊತೆಗೆ ಇದೇ ಸಂರಕ್ಷಣಾ ತಂತ್ರಗಳನ್ನು ವರ್ಷದ ವಿವಿಧ ಋತುಗಳಲ್ಲಿ ಸಿಗುವ ಹಣ್ಣು, ತರಕಾರಿಗಳಿಗೂ ಬಳಸಬಹುದು.

Dr. Alemwati Pongener

Scientist (Fruit Science)

ICAR-National Research Centre on Litchi

Muzaffarpur, Bihar.

Email: alemwati @gmail.com

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ‌೨ ; ಜೂನ್೨೦‌೨೧

 

 

 

Recently Published Articles

Women-led farm initiatives

Women-led farm initiatives

By using organic farming methods, developing connections with markets, generating income, and enhancing their own...

Topics

Call for articles

Share your valuable experience too

Share This