ಭಾರತದಲ್ಲಿನ ಸಾಂಪ್ರದಾಯಿಕ ಕೃಷಿ-ಪಶುಸಂಗೋಪನಾ ವ್ಯವಸ್ಥೆಗಳ ಅವಲೋಕನ

ರಿತುಜಾ ಮಿತ್ರ ಮತ್ತು ಸಾಹಿತ್


ಪಶುಸಂಗೋಪನೆ ಮತ್ತು ಕೃಷಿ ನಡುವಿನ ಪರಸ್ಪರ ಸಂಬಂಧಗಳು ಸುಸ್ಥಿರ ಹಸಿರು ಪರಿಸರ ಉಳಿಸುವಲ್ಲಿ ಮತ್ತು ಜಾಗತಿಕ ಆರ್ಥಿಕತೆ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶದಾದ್ಯಂತದ ಗ್ರಾಮೀಣ ವ್ಯವಸ್ಥೆಗಳ ಉದಾಹರಣೆಗಳು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಜಾನುವಾರುಗಳ ಗೊಬ್ಬರದ ಪಾತ್ರ, ಆರ್ಥಿಕ ಮತ್ತು ಪರಿಸರ ಮೌಲ್ಯಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ.


ಅನಾದಿ ಕಾಲದಿಂದಲೂ ಭಾರತದಾದ್ಯಂತ ಕೃಷಿ-ಪಶುಸಂಗೋಪನಾ ವ್ಯವಸ್ಥೆಗಳು ಪರಿಸರ ವಿಜ್ಞಾನದೊಂದಿಗೆ ಸಂಬಂಧವನ್ನು ಹೊಂದಿವೆ. ಜಾನುವಾರು ತಳಿಯು ಆರ್ಥಿಕ ವ್ಯವಸ್ಥೆಯ ಮೂಲಾಧಾರವಾಗಿ ಹೊರಹೊಮ್ಮಿದೆ. ದೇಶಾದ್ಯಂತ ಅಲೆಮಾರಿ ಪಶುಪಾಲಕರು ಕೃಷಿ ಮತ್ತು ಸಾಂಪ್ರದಾಯಿಕ ಪಶುಪಾಲನಾ ವೃತ್ತಿಯನ್ನು ಉಳಿಸಿಕೊಳ್ಳಲು ರೈತರೊಂದಿಗೆ ಸಂಬಂಧ ಹೊಂದಿದ್ದಾರೆ. ಕುರಿಗಾಹಿಗಳು ಮತ್ತು ರೈತರ ಪರಸ್ಪರ ಸಂಬಂಧವು ಸ್ಥಳೀಯ ಆರ್ಥಿಕತೆಗೆ ಅನುಕೂಲವಾಗುವಂತೆ ವಿಕಸನಗೊಂಡಿದೆ. ರೈತರು ಮತ್ತು ಪಶುಪಾಲಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವುದರೊಂದಿಗೆ ಪರಿಸರಾತ್ಮಕವಾಗಿಯೂ ಸುಸ್ಥಿರತೆಯನ್ನು ಹೊಂದಿದೆ.

ಪರಸ್ಪರ ಸಂಬಂಧದ ಸನ್ನಿವೇಶಗಳು

ಹವಾಮಾನ ವೈಪರಿತ್ಯಗಳು ಪ್ರಾದೇಶಿಕ ಮೇವಿನ ಸಂಪನ್ಮೂಲಗಳ ಲಭ್ಯತೆಯ ಮೇಲೆ ಪರಿಣಾಮ ಬೀರುವುದರಿಂದ ಪಶುಸಂಗೋಪಕರು ಅಲೆದಾಟವು ಹೆಚ್ಚಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ರೂಪಗಳಲ್ಲಿರುವ ಪಶುಸಂಗೋಪನೆಯು ರೈತರೊಂದಿಗೆ ಸಂಬಂಧ ಹೊಂದಿದೆ. ಕಾಲಾಂತರದಲ್ಲಿ ದೇಶಾದ್ಯಂತ ಕೃಷಿಯು ವಾಣಿಜ್ಯೀಕರಣಗೊಳ್ಳುತ್ತಿರುವುದರಿಂದ ಈ ಪದ್ಧತಿಯು ನಶಿಸಿಹೋಗುತ್ತಿದೆ.

ಸಂಬಂಧಗಳ ಹೆಣಿಗೆ : ಪಶ್ಚಿಮ ಭಾರತದಲ್ಲಿನ ಐತಿಹ್ಯಗಳು

ಭಾರವಾಡಿ ಮಹಿಳೆಯರು ಹತ್ತಿ ಹೊಲವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಮೇಕೆಯೊಂದು ಮರಿಗೆ ಜನ್ಮವಿತ್ತಿದೆ. ಫೋಟೊ: ರಿತುಜಾ ಮಿತ್ರ

ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ಸ್ಥಳೀಯವಾಗಿ ಮಾಲ್ಧಾರಿಗಳು-ಭಾರವಾಡರು ಎಂದು ಕರೆಯಲ್ಪಡುವ ಪಶುಪಾಲಕರು ತಮ್ಮ ಜಾನುವಾರುಗಳಿಗೆ ಮೇವಿನ್ನು ಹುಡುಕುತ್ತಾ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯಣಿಸುತ್ತಾರೆ. ಅವರು ಮೇವಿಗಾಗಿ ರೈತರ ಭೂಮಿಯನ್ನು ಅವಲಂಭಿಸಿದ್ದಾರೆ. 37 ವರ್ಷದ ರಾಜಾ ಭಾಯ್, ಮೇಕೆ ಮತ್ತು ಹಲಾರಿ ಕತ್ತೆ ಸಾಕಣೆದಾರ. ಖಂಬಲಿಯಾ ಬ್ಲಾಕ್‌ನಲ್ಲಿರುವ ತನ್ನ ಸ್ಥಳೀಯ ಗ್ರಾಮದಿಂದ ದೀಪಾವಳಿಯ ನಂತರ ದೇವಭೂಮಿ ದ್ವಾರಕಾದಿಂದ ರಾಜ್‌ಕೋಟ್‌ನ ಉಪ್ಲೇಟಾ ಬ್ಲಾಕ್‌ವರೆಗೆ ಪಯಣಿಸುತ್ತಾನೆ. ಹೆಚ್ಚಾಗಿ ಖಾರಿಫ್ ಬೆಳೆಗಳ ಅವಧಿ ಮುಗಿದ ಮೇಲೆ ಹತ್ತಿ ಕೊಯ್ಲು ಮಾಡಿದ ನಂತರ ರೈತರಿಗೆ ಹೊಲಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರ ಅಗತ್ಯವಿರುತ್ತದೆ. ನಮ್ಮ ಜಾನುವಾರುಗಳಿಗೆ ಮೇವಿನ ಅಗತ್ಯವಿರುತ್ತದೆ. ಆದ್ದರಿಂದ ನಾವು ಅವರೊಂದಿಗೆ ನಿಮ್ಮ ಭೂಮಿಯನ್ನು ಸ್ವಚ್ಛಮಾಡಿ ಮಾಡಿಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಳ್ಳುತ್ತೇವೆ. ಹೊಸ ಋತುವಿಗೆ ಬಿತ್ತನೆಗೆ ಅನುಕೂಲವಾಗುವಂತೆ ಭೂಮಿಯನ್ನು ಸಿದ್ಧಮಾಡಿಕೊಡುತ್ತೇವೆ,” ಎಂದು ಅವರು ಹೇಳುತ್ತಾರೆ.

ಭೂಪತ್ ಭಾಯಿ ಬೂಂಡಿಯಾ ಅವರು ಅಕ್ಟೋಬರ್ ಅಂತ್ಯದಿಂದ ಜೂನ್‌ವರೆಗೆ ದ್ವಾರಿಕಾದ ರಾಜ್‌ಪಾರಾ ಗ್ರಾಮದಿಂದ ಸುಮಾರು 200 ಕಿ.ಮೀ ಪಯಣಿಸುತ್ತಾರೆ. ಅವರು ಇದರ ಹಿಂದಿನ ಆರ್ಥಿಕತೆಯನ್ನು ಹೀಗೆ ವಿವರಿಸುತ್ತಾರೆ- “ಸಾಮಾನ್ಯವಾಗಿ ಯಾವುದೇ ಕೆಲಸಗಾರರಾಗಿದರೂ ಹತ್ತಿ ಗಿಡಗಳನ್ನು ಕೀಳಲು ದಿನವೊಂದಕ್ಕೆ ರೂ.೩೫೦ ಕೊಡಬೇಕು. ಅವರು ದಿನವೊಂದಕ್ಕೆ ಸುಮಾರು ಐದು ಗಂಟೆ ಕೆಲಸ ಮಾಡುತ್ತಾರೆ. ಐದು ಎಕರೆ ಭೂಮಿಯನ್ನು ಹೊಂದಿರುವ ರೈತ ತನ್ನ ಭೂಮಿಯನ್ನು ಮುಂದಿನ ಬೆಳೆಗೆ ಸಿದ್ಧಮಾಡಲು ಹತ್ತು ದಿನಕ್ಕೆ ರೂ.೩೫೦೦ ಖರ್ಚುಮಾಡಬೇಕಾಗುತ್ತದೆ. ನಮ್ಮ ಮೇಕೆಗಳು, ಕುರಿಗಳು ದಿನವಿಡಿ ಮೇಯುತ್ತವೆ. ನಮ್ಮ ಹೆಂಗಸರು ಅವುಗಳು ಮೇಯ್ದ ಗಿಡಗಳನ್ನು ಕಿತ್ತು ಗುಡ್ಡೆಹಾಕುತ್ತಾರೆ. ಇದಕ್ಕೆ ನಾವು ಹಣ ತೆಗೆದುಕೊಳ್ಳುವುದಿಲ್ಲ.”

ಭಾರವಾಡಿಗಳು ಹತ್ತಿಯ ಹೊಲದಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಿರುವುದು. ಉಪಲೆಟಾ ತಾಲ್ಲೂಕು, ಜಾಮನಗರ (ಚಿತ್ರ: ರಿತುಜಾ ಮಿತ್ರ)

ಆರ್ಥಿಕ ಸುಸ್ಥಿರತೆಗೆ ಈ ರೀತಿಯ ಸಹಕಾರ ಸಂಬಂಧ ಅಗತ್ಯ ಎನ್ನುವುದನ್ನು ಈ ಅಲೆಮಾರಿ ಪಶುಸಂಗೋಪನಾ ಸಮುದಾಯಗಳು ಅರಿತಿವೆ. ಈ ರೀತಿಯ ಸಂಬಂಧವು ಸಾಂಸ್ಕೃತಿಕ ಸಂಬಂಧವನ್ನು ಕೂಡ ಗಟ್ಟಿಗೊಳಿಸುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಜಾಮ್‌ನಗರದ ಸೇಠ್ ವಡಾಲ ಗ್ರಾಮದ ಬಳಿಯ ರೈತ ಭೀಮಾ ಭಾಯಿ, “ಅಂತಹ 5 ಮಾಲ್ಧಾರಿ ಕುಟುಂಬಗಳಿಗೆ ನನ್ನ ಕೃಷಿ ಭೂಮಿಯಲ್ಲಿ ಉಳಿಯಲು ಅವಕಾಶ ನೀಡುತ್ತೇನೆ. ಇದನ್ನು ನಮ್ಮ ಕುಟುಂಬದವರು ಹಿಂದಿನಿಂದಲೂ ಅನುಸರಿಸುತ್ತಿದೆ” ಎಂದು ಹೇಳುತ್ತಾರೆ. ಇದು ಎಲ್ಲರಿಗೂ ಸೇರಿದ ಭೂಮಿ ಎಂದು ಹೇಳುತ್ತಾ ಅವರಲ್ಲಿ ರೂಢಿಯಲ್ಲಿರುವ “ಈ ಭೂಮಿ ಗೋಪಾಲನದು” ಎನ್ನುವ ಮಾತನ್ನು ಉಲ್ಲೇಖಿಸುತ್ತಾರೆ. ಮೇಕೆಗಳು, ಆಡುಗಳು ಹೊಲದ ಗಿಡಗಳನ್ನು ತಿಂದು ಸ್ವಚ್ಛ ಮಾಡುವುದರ ಜೊತೆಗೆ ಗೊಬ್ಬರವನ್ನು ನೀಡುವುದರೊಂದಿಗೆ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುತ್ತವೆ. ಮಾಲ್ಧಾರಿಗಳು ರೈತರಿಗೆ ಅವಶ್ಯಕತೆ ಬಿದ್ದಾಗ ಮೇಕೆಯ ಹಾಲನ್ನು ಕೂಡ ನೀಡುತ್ತಾರೆ ಎಂದು ಭೀಮಾ ಭಾಯಿ ಹೇಳುತ್ತಾರೆ.

 

 

 

 

 

ಆಂಧ್ರ ಪ್ರದೇಶದಲ್ಲಿನ ನಂಬಿಕೆಯೊಂದರ ಕತೆ

ಅನಂತಪುರದ ರೈತರ ಹೊಲಕ್ಕೆ ಹೋಗುವ ಮಾರ್ಗದಲ್ಲಿ  [ಚಿತ್ರ: ಸಾಹಿತ್]

ಪರಸ್ಪರ ನಂಬಿಕೆಯ ಇಂತಹ ಉದಾಹರಣೆಗಳನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ರೈತರು ಹಂಚಿಕೊಂಡಿದ್ದಾರೆ. ಕುರುಮ ಸಮುದಾಯದ ಬಹುತೇಕ ಕುರಿಸಾಕಣೆದಾರರು ಮೇವನ್ನು ಅರಸಿ  ರೈತರ ಜಮೀನುಗಳಿಗೆ ಬರುತ್ತಾರೆ. ಅವರಿಗೆ ರೈತರು ಊಟ, ವಸತಿ ಹಾಗೂ ಬಟ್ಟೆ ನೀಡುತ್ತಾರೆ. ಈ ರೀತಿ ಅವರುಗಳು ಜಮೀನಿಗೆ ಭೇಟಿ ನೀಡುವುದನ್ನು ರೈತರು ಹಬ್ಬದಂತೆ ಆಚರಿಸುತ್ತಾರೆ. ಅವರ ಭೇಟಿಯ ಸಮಯದಲ್ಲಿ ಕೊರಲು ಪಾಯಸಂ ಮಾಡಿ ಆ ಕುರುಬರಿಗೆ ನೀಡುತ್ತಾರೆ. ಅನಂತಪುರದಂತಹ ತೀವ್ರ ಹವಾಮಾನ ವೈಪರಿತ್ಯದ ಪ್ರದೇಶಗಳಲ್ಲಿ ಈ ರೀತಿಯ ಸಂಬಂಧಗಳು ಸಣ್ಣ ರೈತರ ಹಿತಾಸಕ್ತಿಯನ್ನು ಕಾಯುವುದರೊಂದಿಗೆ ಆ ಕುರುಬರ ವೃತ್ತಿಯನ್ನು ಕಾಪಾಡುತ್ತದೆ.

 

ಹಿಮಾಲಯದ ಕತೆಗಳು

ಜೌನ್ಸರ್-ಬಾವರ್‌ನ ಪಶುಸಂಗೋಪಕರು ಬೇಸಿಗೆ ಮತ್ತು ಚಳಿಗಾಲಗಳಲ್ಲಿ ತಮ್ಮ ಜಾನುವಾರುಗಳಿಗೆ ಮೇವನ್ನು ಹುಡುಕುತ್ತಾ ಪ್ರಯಾಣ ಹೊರಡುತ್ತಾರೆ. ಇದು ಆಯಾ ಪ್ರದೇಶಗಳ ರೈತರೊಂದಿಗೆ ಮಾತ್ರವಲ್ಲದೆ ಕುಶಲಕರ್ಮಿಗಳೊಂದಿಗೂ ವಿಶಿಷ್ಟ ಬಾಂಧ್ಯವನ್ನು ಏರ್ಪಡಿಸುತ್ತದೆ. ಪಶ್ಚಿಮ ಹಿಮಾಲಕ್ಕೆ ಸೇರಿದ ಉತ್ತರಾಖಂಡ ಭಾಗದ ಪಶುಸಂಗೋಪಕರು ಬಹುತೇಕ ಕುರಿ, ಮೇಕೆಗಳನ್ನು ಸಾಕಣೆ ಮಾಡುತ್ತಾರೆ. ಅವರು ಸೆಪ್ಟಂಬರ್‌ – ಅಕ್ಟೋಬರ್‌ ತಿಂಗಳಲ್ಲಿ ಕೊಯ್ಲಾಗುವ ಸೇಬು ಮತ್ತು ಏಪ್ರಿಕಾಟ್‌ ತೋಟಗಳನ್ನು ಮೇವಿಗಾಗಿ ಅವಲಂಬಿಸಿರುತ್ತಾರೆ. ಈ ಸಂಗೋಪಕರು ರೈತರ ತೋಟಗಳಿಗೆ ಹೋಗಿ ಅಲ್ಲಿಯೇ ತಮ್ಮ ಜಾನುವಾರಗಳನ್ನು ಮೇಯಿಸುತ್ತಾರೆ. ಅಲ್ಲೇ ಕುರಿಯ ಉಣ್ಣೆಯನ್ನು ತೆಗೆಯುತ್ತಾರೆ. ಅದರಲ್ಲಿ ಸ್ವಲ್ಪ ಭಾಗವನ್ನು ಕಂಬಳಿ ನೇಯುವವರಿಗೆ ಕೊಟ್ಟು ಸ್ವಂತಕ್ಕೆ ಕಂಬಳಿ ನೇಯಿಸಿಕೊಳ್ಳುತ್ತಾರೆ. ಉಳಿದದ್ದನ್ನು ಮಾರಾಟ ಮಾಡುತ್ತಾರೆ.

ಜಾನ್ಸಾರ್‌ನ ಸೇಬಿನ ತೋಟದಲ್ಲಿ ತನ್ನ ಹಿಂಡಿನೊಂದಿಗೆ ಪಶುಪಾಲಕ (ಫೋಟೋ: ರಿತುಜಾ ಮಿತ್ರ)

ಜೌನ್ಸರ್‌ನ ಗೊರ್ಚಾ ಹಳ್ಳಿಯ ಪುರಾಣ ಸಿಂಗ್‌ ಚೌಹಾಣ್‌ “ಇಲ್ಲಿನ ಪ್ರತಿ ಕುಟುಂಬದ ಒಬ್ಬರು ಇಲ್ಲವೆ ಇಬ್ಬರು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಹಣ ಆಧಾರಿತ ಆರ್ಥಿಕತೆ ಹೆಚ್ಚಾದಂತೆ, ಡೆಹ್ರಾಡೂನ್‌ – ವಿಕಾಸನಗರಗಳು ಬೆಳೆದಂತೆ ಬಹುತೇಕ ಯುವಕರು ಪಟ್ಟಣದ ಹಾದಿ ಹಿಡಿದಿದ್ದಾರೆ. ಈಗ ಈ ವೃತ್ತಿಯನ್ನು ಮಾಡುವವರ ಸಂಖ್ಯೆ ಹಿಂದೆಂದಿಗಿಂತಲೂ ಕಡಿಮೆಯಾಗಿದೆ,” ಎಂದು ಹೇಳುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರೆದಂತೆ ಪಶುಸಂಗೋಪಕರು ಮತ್ತು ರೈತರು ಮಾತ್ರವಲ್ಲ ಸಾಂಪ್ರದಾಯಿಕ ಪಶುಪಾಲನಾ ಉತ್ಪನ್ನಗಳಾದ ಚೌರಾ [ಕುರಿ ಉಣ್ಣೆಯಿಂದ ಮೇಲಂಗಿ], ಖುರ್ಸಾ [ಮೇಕೆ ಉಣ್ಣೆಯಿಂದ ಬೆಚ್ಚಗಿನ ಬೂಟುಗಳು], ಖಾರ್ಸಾ [ಮೇಕೆ ಉಣ್ಣೆಯಿಂದ ಚಾಪೆ] ಇನ್ನು ಮುಂದೆ ಇಲ್ಲವಾಗುತ್ತದೆ.

ಇಂತಹ ಬದಲಾವಣೆಗಳು ಸ್ಥಳೀಯ ಪರಿಸರ ವ್ಯವಸ್ಥೆಯೊಂದಿಗೆ ಹೆಣೆದುಕೊಂಡ ಸಾಂಪ್ರದಾಯಿಕ ಕೃಷಿ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ. ರೈತರಿಗೆ ಈಗ ಸಾವಯವ ಗೊಬ್ಬರವನ್ನು ಹೊಂಚಿಕೊಳ್ಳಲು ಕಷ್ಟವಾಗುತ್ತಿದ್ದು ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗುತ್ತಿದ್ದಾರೆ. ಇದು ಈ ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ದೀರ್ಘಕಾಲಿಕ ಹಾನಿಯನ್ನುಂಟುಮಾಡುತ್ತದೆ.

 

 

 

 

 

ಗುರುತಿಸುವಿಕೆ ಹಾಗೂ ಸಂಪರ್ಕಗಳ ಅಗತ್ಯತೆ

ಕೆಲವು ರಾಜ್ಯಗಳಲ್ಲಿ ಸಹಜ ಕೃಷಿಯತ್ತ ಒಲವು ಹೆಚ್ಚುತ್ತಿದೆ. ಪಶುಸಂಗೋಪಕ ಸಮುದಾಯಗಳನ್ನು ರೈತರೊಂದಿಗೆ ಬೆಸೆಯುವುದರಿಂದ ಇಬ್ಬರಿಗೂ ಆರ್ಥಿಕವಾಗಿ ಲಾಭವಾಗುವುದರೊಂದಿಗೆ ಪರಿಸರಕ್ಕೂ ಒಳಿತಾಗುತ್ತದೆ. ಹೀಗೆ ಸಂಪರ್ಕ ಬೆಸೆಯುವುದರಿಂದ ರೈತರಿಗೆ ಸಾವಯವ ಗೊಬ್ಬರ ಸ್ಥಳದಲ್ಲೇ ಸಿಗುವಂತಾಗುತ್ತದೆ ಪಶುಸಂಗೋಪಕರು ಗೊಬ್ಬರವನ್ನು ರೈತರಿಗೆ ನೀಡುವ ಮೂಲಕ ಆದಾಯವನ್ನು ಗಳಿಸಬಹುದು. ಮೇಲೆ ನೀಡಿದಂತಹ ಉದಾಹರಣೆಗಳು ದೇಶದಾದ್ಯಂತ ಇರುವಂತಹ ಪಶುಸಂಗೋಪಕ ವ್ಯವಸ್ಥೆಗಳು, ನೈಸರ್ಗಿಕ ಸಂಪನ್ಮೂಲಗಳು, ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಬಗೆ, ಜಾನುವಾರುಗಳಿಂದಾಗುವ ಆರ್ಥಿಕ ಹಾಗೂ ಪರಿಸರಾತ್ಮಕ ಉಪಯೋಗಗಳು, ಜಾನುವಾರುಗಳ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕುರಿತಾದ ಅವರ ಜ್ಞಾನ ವ್ಯವಸ್ಥೆಯನ್ನು ಅರಿಯಲು ನೆರವಾಗುತ್ತದೆ. ಕೃಷಿ ಹಾಗೂ ಪಶುಸಂಗೋಪನಾ ವ್ಯವಸ್ಥೆಯ ನಡುವೆ ಸಂಪರ್ಕ ಬೆಸೆಯುವುದು ಹಸಿರನ್ನು ಉಳಿಸುವಲ್ಲಿ, ಪರಿಸರಾತ್ಮಕವಾಗಿ ಸುಸ್ಥಿರತೆ ಸಾಧಿಸುವಲ್ಲಿ ಹಾಗೂ ಜಾಗತಿಕ ಆರ್ಥಿಕತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಸ್ಥಿರ ಹಾಗೂ ದುರ್ಬಲ ಪಶುಸಂಗೋಪಕರ ಸಮುದಾಯವನ್ನು ಬಲಗೊಳಿಸಲು ವ್ಯವಸ್ಥೆಗಳು ಹಾಗೂ ಪಾಲಿಸಿಗಳನ್ನು ಅಭಿವೃದ್ಧಿಗೊಳಿಸಬೇಕು.

Rituja Mitra

Email: rituja@sahjeevan.org

 

Sahith

Consultant, The Economics Centre of World Resource Institute, India.

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ‌೪ ; ಡಿಸೆಂಬರ್ ೨೦‌೨೧

Recently Published Articles

Women-led farm initiatives

Women-led farm initiatives

By using organic farming methods, developing connections with markets, generating income, and enhancing their own...

Topics

Call for articles

Share your valuable experience too

Share This